ಖಜಾನೆ ಹುಂಡಿ	

	ಸರ್ಕಾರದ ಅಲ್ಪಾವಧಿ ಋಣಪತ್ರ; ಸಾಮಾನ್ಯವಾಗಿ ಒಂದು ವರ್ಷದೊಳಗಿನ ವಾಯಿದೆಯುಳ್ಳದ್ದು (ಟ್ರೆಷರಿ ಬಿಲ್). ಇದೊಂದು ಸರ್ಕಾರಿ ವಚನಪತ್ರ. ಸರ್ಕಾರ ಪಡೆದುಕೊಂಡ ಠೇವಣಿಗೆ ಪ್ರತಿಯಾಗಿ ಇದನ್ನು ಕೊಡಲಾಗುತ್ತದೆ. ಠೇವಣಿ ನೀಡಿದವನ - ಎಂದರೆ ಧನಿಯ-ಹೆಸರನ್ನು ಬರೆಯಲು ಹುಂಡಿಯಲ್ಲಿ ಸ್ಥಳ ಬಿಡಲಾಗಿರುತ್ತದೆ. ಅದರಲ್ಲಿ ಅವನ ಹೆಸರನ್ನು ಕಾಣಿಸಿರದಿದ್ದರೆ ಅದರ ಮೊಬಲಗನ್ನು ಹುಂಡಿಯ ವಾಹಕನಿಗೆ (ಬೇರರ್) ಕೊಡಲಾಗುವುದು. ಮಾರುಕಟ್ಟೆಯಲ್ಲಿ ವ್ಯವಹರಿಸಲಾಗುವ ಖಜಾನೆ ಹುಂಡಿಗಳು ಬಹುತೇಕ ವಾಹಕ ಪತ್ರಗಳು. ಸಾಮಾನ್ಯ ಹುಂಡಿಗೂ ಖಜಾನೆ ಹುಂಡಿಗೂ ವ್ಯತ್ಯಾಸವುಂಟು. ಇದು ಸರ್ಕಾರದ ವಚನಪತ್ರವಾದ್ದರಿಂದ ಇದಕ್ಕೆ ಇತರರ ಭರವಸೆ ಅನಗತ್ಯ; ಇದರ ಹಿಂದೆ ಸಹಿಮಾಡುವವರಿಂದ ಇದರ ಪ್ರತ್ಯಯ (ಕ್ರೆಡಿಟ್) ಹೆಚ್ಚುವುದಿಲ್ಲ.

	ಖಜಾನೆ ಹುಂಡಿಯ ಉಗಮವಾದ್ದು ಇಂಗ್ಲೆಂಡಿನಲ್ಲಿ-1877ರಲ್ಲಿ. ವಾಲ್ಟರ್ ಬೇಜ್‍ಹಟ್ ಇದರ ಜನಕ. ಸರ್ಕಾರಕ್ಕೆ ಸ್ವಲ್ಪ ಹಣ ಬೇಕಾಗಿದೆಯೆಂದೂ ಸರ್ಕಾರದ ಚಲ ಋಣವನ್ನು ಅಧಿಕಗೊಳಿಸಿ ಹಣ ಪಡೆಯುವ ಉಪಾಯ ಸೂಚಿಸಬೇಕೆಂದೂ ವಾಲ್ಟರ್ ಬೇಜ್‍ಹಟನಿಗೆ ಇಂಗ್ಲೆಂಡಿನ ಅರ್ಥಸಚಿವ ಕೇಳಿಕೊಂಡಾಗ ಆತ ಖಜಾನೆ ಹುಂಡಿ ವಿಧಾನವನ್ನು ಸೂಚಿಸಿದನಂತೆ. ಇಂಗ್ಲೆಂಡಿಗೆ ಇಡೀ ವಿಶ್ವದಲ್ಲೇ ಅತ್ಯಧಿಕ ಪ್ರತ್ಯಯ ಇರುವುದರಿಂದ ಅದರ ಪರಮಾವಧಿ ಪ್ರಯೋಜನ ಪಡೆಯಲು ಸರ್ಕಾರ ಪ್ರಯತ್ನಿಸಬೇಕೆಂದು ಹೇಳಿದ. ವಾಣಿಜ್ಯ ಹುಂಡಿಯನ್ನೇ ಸಾಧ್ಯವಾದಮಟ್ಟಿಗೆ ಹೋಲುವಂಥ, ಎಂದರೆ ವಟ್ಟಕ್ಕೆ ನೀಡಬಹುದಾಂಥ, ನಿಶ್ಚಿತ ಕಾಲದಲ್ಲಿ ವಾಯಿದೆ ತುಂಬುವಂಥ ಪ್ರತಿಭೂತಿಯನ್ನು ಸಾರ್ವಜನಿಕರಿಗೆ ನೀಡಬಹುದೆಂಬುದು ಅವನ ಸಲಹೆ. ಅಂದಿನಿಂದ ಖಜಾನೆ ಹುಂಡಿಗಳು ಸರ್ಕಾರದ ಒಂದು ಮುಖ್ಯ ಹಣ ಎತ್ತುವ ಸಾಧನವಾಗಿವೆ. ಇತರ ದೇಶಗಳಲ್ಲೂ ಇವು ಪ್ರಿಯತೆ ಗಳಿಸಿವೆ.

	ಖಜಾನೆ ಹುಂಡಿಗಳ ಮೂಲಕ ಹಣ ಪಡೆಯಬೇಕೆಂದು ಸರ್ಕಾರ ಇಚ್ಛಿಸಿದಾಗ ಅವುಗಳ ಬಗ್ಗೆ ನಮೂದನೆ (ಟೆಂಡರ್) ಕರೆದು ಸರ್ಕಾರಿ ಪ್ರಕಟನೆ ಹೊರಬೀಳುತ್ತದೆ. ಹುಂಡಿಗಳ ಮೇಲೆ ಬಡ್ಡಿ ಇರುವುದಿಲ್ಲ. ಆದ್ದರಿಂದ ಅವನ್ನು ಕೊಳ್ಳಬಯಸುವವರು ಯಾವ ವಟ್ಟದ ದರದಲ್ಲಿ ಕೊಳ್ಳಲಿಚ್ಛಿಸುವರೆಂಬುದರ ಬಗ್ಗೆ ನಮೂದನೆ ಸಲ್ಲಿಸುತ್ತಾರೆ. ಹುಂಡಿಯ ಹಣದ ಪಾವತಿ ಯಾವಾಗ ಆಗಬೇಕೆಂಬುದನ್ನು ನಮೂದಕರೇ ಸೂಚಿಸುತ್ತಾರೆ. ಪ್ರತಿವಾರವೂ ಬರುವ ನಮೂದನೆಗಳಿಗೆ ಅನುಗುಣವಾಗಿ ಪ್ರತಿ ಮುಂದಿನ ವಾರವೂ ಹುಂಡಿಗಳನ್ನು ನೀಡಲಾಗುತ್ತದೆ.

	ಖಜಾನೆ ಹುಂಡಿಯಿಂದ ಅನೇಕ ಅನುಕೂಲಗಳುಂಟು. ದೀರ್ಘಾವಧಿ ಸಾಲಕ್ಕಿಂತ ಇದು ಸಾಮಾನ್ಯವಾಗಿ ಹೆಚ್ಚು ಅಗ್ಗ. ನಮೂದಕನ ಹಣ ಭದ್ರವಾಗಿರುವುದರಿಂದ, ಅದು ಶೀಘ್ರವಾಗಿ ವಾಪಸು ಬರುವುದರಿಂದ ಖಚಿತ ಕಡಿಮೆ ದರದಲ್ಲಿ ಅದನ್ನು ಅವನು ಸರ್ಕಾರಕ್ಕೆ ಸಲ್ಲಿಸಲೊಪ್ಪುತ್ತಾನೆ. ದ್ರವತ್ವ ಇವರ ಒಂದು ಮುಖ್ಯ ಗುಣ. ಬ್ಯಾಂಕುಗಳಿಗೂ ಇದು ಆಕರ್ಷಕವಾದ ಪ್ರತಿಭೂತಿ, ಏಕೆಂದರೆ ಇದನ್ನು ಕ್ರಯಿಸುವುದೂ ವಿಕ್ರಯಿಸುವುದೂ ಸುಲಭ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಖಜಾನೆ ಹುಂಡಿಗಳಲ್ಲಿ ತೊಡಗಿಸುತ್ತವೆ. ಅಲ್ಪಾವಧಿಯ, ಭದ್ರವಾದ, ವಟ್ಟ ಸಂಪಾದನೆ ಮಾಡುವ, ಜರೂರು ಸಂದರ್ಭದಲ್ಲಿ ಕೇಂದ್ರೀಯ ಬ್ಯಾಂಕಿನಲ್ಲಿ ಸುಲಭವಾಗಿ ಮರುವಟಾಯಿಸಬಹುದಾದ ಖಜಾನೆ ಹುಂಡಿಗಳು ವಾಣಿಜ್ಯ ಬ್ಯಾಂಕಿನ ದೃಷ್ಟಿಯಲ್ಲಿ ಸಾಮಾನ್ಯ ವ್ಯಾಪಾರ ಹುಂಡಿಗಳ ಎಲ್ಲ ಅನುಕೂಲಗಳನ್ನು, ಜೊತೆಗೆ ಕೆಲವು ಅಧಿಕ ಅನುಕೂಲಗಳನ್ನು ಪಡೆದಿವೆ. 			(ಸಿ.ಸಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ